Hadith for the World
Virtues

Excellence of Monotheism

4 hadiths

4 hadiths

ಅಬೂ ಸಈದ್ ಖುದ್ರಿ ಮತ್ತು ಅಬೂ ಹುರೈರ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಒಬ್ಬ ಮುಸಲ್ಮಾನನಿಗೆ ಆಯಾಸ, ಅನಾರೋಗ್ಯ, ಆತಂಕ, ದುಃಖ, ಹಾನಿ, ಸಂಕಟ ಮುಂತಾದ ಯಾವುದೇ ಸಂಭವಿಸಿದರೂ, ಎಲ್ಲಿಯವರೆಗೆಂದರೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ಸಹ, ಅದಕ್ಕೆ ಪರಿಹಾರವಾಗಿ ಅಲ್ಲಾಹು ಅವನ ಕೆಲವು ಪಾಪಗಳನ್ನು ಅಳಿಸದೆ ಇರುವುದಿಲ್ಲ.”متفق عليه
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಮುಆದ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಾಗ ಅವರು ಕರೆದರು: "ಓ ಮುಆದ್ ಬಿನ್ ಜಬಲ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಅವರು ಕರೆದರು: "ಓ ಮುಆದ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಹೀಗೆ ಅವರು ಮೂರು ಬಾರಿ ಕರೆದರು. ನಂತರ ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ." ಮುಆದ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಜನರಿಗೆ ಸಂತೋಷವಾಗುವ ಈ ಸುದ್ದಿಯನ್ನು ನಾನು ಅವರಿಗೆ ತಿಳಿಸಲೇ?" ಅವರು ಹೇಳಿದರು: "ಬೇಡ, ಅವರು ಅದರ ಮೇಲೆ ಅವಲಂಬಿತರಾಗುವರು." (ಜ್ಞಾನವನ್ನು ಬಚ್ಚಿಟ್ಟ) ಪಾಪಕ್ಕೆ ಗುರಿಯಾಗದಿರಲು ಮುಆದ್ ಮರಣದ ಸಮಯದಲ್ಲಿ ಇದನ್ನು ಜನರಿಗೆ ತಿಳಿಸಿದರು.متفق عليه
ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಉಫೈರ್ ಎಂಬ ಹೆಸರಿನ ಒಂದು ಕತ್ತೆಯ ಮೇಲೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಓ ಮುಆದ್! ದಾಸರ ಮೇಲಿರುವ ಅಲ್ಲಾಹನ ಹಕ್ಕು ಏನೆಂದು ಮತ್ತು ಅಲ್ಲಾಹನ ಮೇಲಿರುವ ದಾಸರ ಹಕ್ಕು ಏನೆಂದು ನಿನಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಜನರಿಗೆ ಈ ಸಿಹಿಸುದ್ದಿಯನ್ನು ತಿಳಿಸಲೇ?" ಅವರು ಉತ್ತರಿಸಿದರು: "ಬೇಡ, ಅವರಿಗೆ ಸಿಹಿ ಸುದ್ದಿ ತಿಳಿಸಬೇಡ. ಅವರು ಅದರ ಮೇಲೆ ಅವಲಂಬಿತರಾಗಬಹುದು."متفق عليه
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! (ಸ್ವರ್ಗ ಮತ್ತು ನರಕವನ್ನು) ಕಡ್ಡಾಯಗೊಳಿಸುವ ಎರಡು ವಿಷಯಗಳು ಯಾವುವು?" ಅವರು ಉತ್ತರಿಸಿದರು: "ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುವವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಅಲ್ಲಾಹನೊಡನೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುವವರು ನರಕವನ್ನು ಪ್ರವೇಶಿಸುತ್ತಾರೆ."رواه مسلم